ನವದೆಹಲಿ: ಹೆಚ್ಚಿನ ದೇಹ ತೂಕದಿಂದಾಗಿ ಒಲಿಂಪಿಕ್ಸ್ ಕುಸ್ತಿ ಫೈನಲ್ ಪಂದ್ಯದಿಂದ ಅನರ್ಹಗೊಂಡಿದ್ದ ಭಾರತದ ಸ್ಟಾರ್ ಕುಸ್ತಿಪಟು ವಿನೇಶ್ ಫೋಗಟ್, ಫೈನಲ್ ಪಂದ್ಯಕ್ಕೂ ಹಿಂದಿನ ರಾತ್ರಿ ತೂಕ ಇಳಿಸಿಕೊಳ್ಳಲು ಹೇಗೆಲ್ಲಾ ಪ್ರಯತ್ನಪಟ್ಟರು ಎಂಬುದನ್ನು ಅವರ ಕೋಚ್ ಹಂಗೇರಿಯಾದ ವೋಲಾರ್ ಅಕೋಸ್ ವಿವರಿಸಿದ್ದಾರೆ.
ಮಹಿಳಾ 50 ಕೆ.ಜಿ ಫೈನಲ್ ಪಂದ್ಯಕ್ಕೆ ಹಿಂದಿನ ರಾತ್ರಿ ವಿನೇಶ್ ಫೋಗಟ್ ಅವರ ದೇಹದ ತೂಕ 50 ಕೆ.ಜಿಗಿಂತ ಹೆಚ್ಚಾಗಿರುವುದು ಕಂಡುಬಂದಿತ್ತು. ಇದಕ್ಕಾಗಿ ರಾತ್ರಿಯಿಡೀ ತೂಕ ಇಳಿಸಲು ಅವರು ನಡೆಸಿದ ಕಸರತ್ತು ನೋಡಿದರೆ ಪ್ರಾಣಕ್ಕೆ ಅಪಾಯ ತರುವಂತಿತ್ತು. ತೂಕ ಕಡಿಮೆ ಮಾಡಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನೂ ಅವರು ಅಂದು ಮಾಡಿದರು. ನಿದ್ದೆ ಬಿಟ್ಟು, ಪ್ರಾಣ ಪಣಕ್ಕಿಟ್ಟು ಪ್ರಯತ್ನಿಸಿದರು ಎಂದು ಕೋಚ್ ತಿಳಿಸಿದ್ದಾರೆ.
ಸೆಮಿಫೈನಲ್‌ನ ನಂತರ ವಿನೇಶ್ ದೇಹ ತೂಕ 2.7 ಕೆ.ಜಿಯಷ್ಟು ಹೆಚ್ಚಾಗಿತ್ತು. ಅಂದು ರಾತ್ರಿಯೇ ಅವರಿಗೆ ನಿರಂತರ ವ್ಯಾಯಾಮ ಮಾಡಿಸಿದ್ದೆವು. ಇದಾದ ಬಳಿಕ ತೂಕ ಕೊಂಚ ತಗ್ಗಿತಾದರೂ 1.5 ಕೆ.ಜಿ ಇನ್ನೂ ಹಾಗೆಯೇ ಉಳಿದಿತ್ತು. 50 ನಿಮಿಷಗಳ ಕಾಲ ಸ್ಟೀಮ್ ಬಾತ್ ಮಾಡಿಸಲಾಯಿತು. ಈ ವೇಳೆ ಅವರ ದೇಹದಿಂದ ಒಂದೇ ಒಂದು ಹನಿ ಬೆವರು ಕೂಡಾ ಹೊರಬರಲಿಲ್ಲ. ಏಕೆಂದರೆ, ಅಷ್ಟು ಬೆವರು ದೇಹದಿಂದ ಅದಾಗಲೇ ಹೊರಹೋಗಿತ್ತು. ಇಲ್ಲಿಗೆ ನಿಲ್ಲದೇ, ಮಧ್ಯರಾತ್ರಿಯಿಂದ ಬೆಳಿಗ್ಗೆ 5:30ರ ವರೆಗೆ ವಿವಿಧ ಕಾರ್ಡಿಯೋ ಯಂತ್ರಗಳ ಮೂಲಕ ವರ್ಕೌಟ್ ಮಾಡಿದ್ದರು. ಕುಸ್ತಿ ಅಭ್ಯಾಸವನ್ನೂ ಮಾಡಿ ದೇಹ ದಂಡಿಸಿದರು.
3-4 ಗಂಟೆಗಳ ನಿರಂತರ ವ್ಯಾಯಾಮದ ಬಳಿಕ ಕೇವಲ 3-4 ನಿಮಿಷಗಳ ಕಾಲ ಮಾತ್ರ ವಿಶ್ರಾಂತಿ ಪಡೆದಿದ್ದರು. ಬಳಿಕ ಮತ್ತೆ ದೇಹ ದಂಡಿಸಲು ಮುಂದಾದಾಗ ಪ್ರಜ್ಞೆತಪ್ಪಿ ಬಿದ್ದರು. ಹೀಗಿದ್ದರೂ ಅವರನ್ನು ಮೇಲೆಬ್ಬಿಸಿ ಮತ್ತೆ ಒಂದು ಗಂಟೆ ಕಾಲ ಸ್ಟೀಮ್ ಬಾತ್ ಮಾಡಿಸಿದ್ದೆವು. ಇದರ ಬಳಿಕ ಏನೂ ಮಾಡಲು ಸಾಧ್ಯವಾಗಲಿಲ್ಲ. ಒಂದು ವೇಳೆ ನಾವು ಮತ್ತೆ ಆಕೆಯಿಂದ ದೇಹ ದಂಡಿಸಲು ಯತ್ನಿಸಿದ್ದರೆ ಅವರು ಬದುಕುವ ಸಾಧ್ಯತೆ ಇರಲಿಲ್ಲ ಎಂದು ಕೋಚ್ ತಿಳಿಸಿದ್ದಾರೆ.
ಇದಾದ ಬಳಿಕ ಫೋಗಟ್ರೊಂದಿಗೆ ನಡೆಸಿದ ಸಂಭಾಷಣೆಯ ಬಗ್ಗೆಯೂ ಬರೆದುಕೊಂಡಿರುವ ಕೋಚ್, ವಿನೇಶ್ ದುಃಖದಲ್ಲಿದ್ದರು ನಿಜ, ಧೈರ್ಯ ಕಳೆದುಕೊಂಡಿರಲಿಲ್ಲ. ನನಗೆ, ದುಃಖಪಡಬೇಡಿ ಕೋಚ್. ನಾನು ಎಂತಹ ಕಠಿಣ ಪರಿಸ್ಥಿತಿಯಲ್ಲಿದ್ದರೂ ಧೈರ್ಯ ತುಂಬಿಕೊಳ್ಳುತ್ತೇನೆ. ನಿಮ್ಮ ಮಾರ್ಗದರ್ಶನದಲ್ಲಿ ನಾನು ವಿಶ್ವದ ಅತ್ಯುತ್ತಮ ಮಹಿಳಾ ಕುಸ್ತಿಪಟು (ಜಪಾನಿನ ಕಿ ಯುಯಿ ಸುಸಾಕಿ)ವನ್ನು ಸೋಲಿಸಿದ್ದೇನೆ. ನಾನು ನನ್ನ ಗುರಿ ಸಾಧಿಸಿದ್ದೇನೆ. ಇದರೊಂದಿಗೆ ನಾನು ವಿಶ್ವದ ಅತ್ಯುತ್ತಮ ಕುಸ್ತಿಪಟುಗಳಲ್ಲಿ ಒಬ್ಬಳೆಂದು ಸಾಬೀತುಪಡಿಸಿದ್ದೇನೆ. ಗೇಮ್‌ಪ್ಲಾನ್‌ಗಳು ಕಾರ್ಯನಿರ್ವಹಿಸುತ್ತವೆ ಎಂದು ನಾವು ಸಾಬೀತುಪಡಿಸಿದ್ದೇವೆ. ಪದಕಗಳು, ವೇದಿಕೆಗಳು ಕೇವಲ ವಸ್ತುಗಳು. ಆದರೆ ನಮ್ಮ ಪ್ರದರ್ಶನವನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿರುವುದಾಗಿ ಕೋಚ್ ಬರೆದುಕೊಂಡಿದ್ದಾರೆ.
ವಿನೇಶ್ ಅವರ ಫೈನಲ್ ಅನರ್ಹತೆಯ ಹೊರತಾಗಿಯೂ, ಅವರು ಕುಸ್ತಿಯ ಮೊದಲ ಪಂದ್ಯದಲ್ಲೇ ಯಾರನ್ನು ಮಣಿಸಿದ್ದಾರೆ ಎಂಬುದನ್ನು ಜಗತ್ತು ನೆನಪಿಸಿಕೊಳ್ಳುತ್ತದೆ. ನಮ್ಮ ಪ್ರಯತ್ನದಿಂದಾಗಿ ವಿಶ್ವದ ನಂ.1 ಕುಸ್ತಿಪಟುವನ್ನು ಮಣಿಸಿ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತೀಯ ಮಹಿಳಾ ಕುಸ್ತಿಪಟು ಫೈನಲ್‌ವರೆಗೂ ಹೋಗಲು ಸಾಧ್ಯವಾಗಿದೆ ಎಂದು ಕೋಚ್ ಹೆಮ್ಮೆ ವ್ಯಕ್ತಪಡಿಸಿದ್ದಾರೆ.